ಬೆಂಗಳೂರು: ಅಕ್ರಮ ಸಂಬಂಧದ ವಿಚಾರವಾಗಿ ನಡೆದ ಗಲಾಟೆಯು ಇಬ್ಬರ ಕೊಲೆಯಲ್ಲಿ ಅಂತ್ಯವಾಗಿರುವ ಭೀಕರ ಘಟನೆ ನಗರದ ವಿದ್ಯಾರಣ್ಯಪುರದ ಎಚ್‌ಎಂಟಿ ಲೇಔಟ್ನಲ್ಲಿ ನಡೆದಿದೆ. ಅಕ್ರಮ ಸಂಬಂಧವನ್ನು ಪ್ರಶ್ನಿಸಲು ಬಂದಿದ್ದ ಅಕ್ಕ ಮತ್ತು ತಮ್ಮನನ್ನು 16 ವರ್ಷದ ಅಪ್ರಾಪ್ತ ಬಾಲಕ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ಮೃತರನ್ನು ಯಮುನಾ (36) ಮತ್ತು ಆಕೆಯ ತಮ್ಮ ಸುದೀಪ್ (34) ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 16 ವರ್ಷದ ಅಪ್ರಾಪ್ತ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಘಟನೆಯ ಹಿನ್ನೆಲೆ:
ಆರೋಪಿ ಬಾಲಕನ ತಾಯಿ ಛಾಯಾ ಎಂಬುವವರ ಜೊತೆ ಯಮುನಾ ಅವರ ಪತಿಗೆ ಅಕ್ರಮ ಸಂಬಂಧವಿತ್ತು ಎನ್ನಲಾಗಿದೆ. ಈ ವಿಚಾರವಾಗಿ ಜಗಳವಾಡಲು ಯಮುನಾ ಮತ್ತು ಸುದೀಪ್ ಅವರು ಛಾಯಾ ಅವರ ಮನೆಗೆ ಹೋಗಿದ್ದರು. ಈ ವೇಳೆ ಇಬ್ಬರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ತನ್ನ ತಾಯಿಯ ಜೊತೆ ಜಗಳವಾಡುತ್ತಿದ್ದನ್ನು ಕಂಡು ಆಕ್ರೋಶಗೊಂಡ ಛಾಯಾ ಅವರ ಪುತ್ರ. ತನ್ನ ಬಳಿಯಿದ್ದ ಚಾಕುವಿನಿಂದ ಯಮುನಾ ಮತ್ತು ಸುದೀಪ್ ಅವರಿಗೆ ಮನಬಂದಂತೆ ಇರಿದಿದ್ದಾನೆ. ತೀವ್ರ ರಕ್ತಸ್ರಾವದ ಪರಿಣಾಮ ಅಕ್ಕ-ತಮ್ಮ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಡಿಸಿಪಿ ನಾಗೇಶ್ ಮತ್ತು ಪಿಣ್ಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಹೆಚ್ಚಿನ ತನಿಖೆ ಮುಂದುವರಿದಿದೆ.