ಬೆಂಗಳೂರು: ಕೇವಲ ಹುಸಿ ದೇಶಪ್ರೇಮದ ಪ್ರಚೋದನೆಯ ಮಾತುಗಳಷ್ಟೇ ನಿಮ್ಮ ಬಂಡವಾಳ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಬಿಜೆಪಿ ಮುಖಂಡರ ವಿರುದ್ಧ ಹರಿಹಾಯ್ದಿದ್ದಾರೆ.
ಪ್ರದೇಶ ಕಾಂಗ್ರೆಸ್ ಕಚೇರಿಗೆ ಶುಕ್ರವಾರ ಭೇಟಿ ನೀಡಿ ಮುಖಂಡರು ಮತ್ತು ಕಾರ್ಯಕರ್ತರ ಅಹವಾಲು ಸ್ವೀಕರಿಸಿದ ಬಳಿಕ ಅವರು ಮಾತನಾಡಿದರು.
"ಜವಾಹರಲಾಲ ನೆಹರು ಅವರು ಶ್ರೀಮಂತ ಕುಟುಂಬದಿಂದ ಬಂದಿದ್ದರು. ಗಾಂಧಿಜೀ ಜತೆಗೆ ಜೈಲುವಾಸ ಅನುಭವಿಸಿದ್ದರು. ಬಿಜೆಪಿಯವರು ಯಾರೊಬ್ಬರೂ ದೇಶಕ್ಕಾಗಿ ಜೈಲು ಸೇರಿಲ್ಲ, ಹೋರಾಟ ಮಾಡಿಲ್ಲ. ಕಾಂಗ್ರೆಸ್ ಪಕ್ಷ ಹಾಗೂ ನೆಹರು ಅವರ ಪರಿಶ್ರಮ ಇವತ್ತು ಫಲಕೊಟ್ಟಿದೆ. ದೇಶ ಅಭಿವೃದ್ಧಿಯತ್ತ ದೃಢ ಹೆಜ್ಜೆಗಳನ್ನು ಇಡುತ್ತಿದೆ. ಈಗ ಅವರು ಹೋಗಿ ಸ್ವಿಚ್ ಆನ್ ಮಾಡುವ ಕೆಲಸ ಮಾಡುತ್ತಿದ್ದಾರೆ. ಚುನಾವಣೆ ಹೊತ್ತಲ್ಲಿ ಹೋಗಿ ಕೇವಲ ಭಾಷಣ ಬಿಗಿಯುತ್ತಾರೆ ಎಂದು ಲೇವಡಿ ಮಾಡಿದರು.
"ನಮ್ಮ ಗ್ಯಾರಂಟಿ ಯೋಜನೆಗಳು ಜನರಿಗೆ ಆರ್ಥಿಕ ಶಕ್ತಿ ನೀಡಿದೆ. ಸರ್ಕಾರ ಗ್ಯಾರಂಟಿಗಳಿಗೆ ಕಳೆದ ಸಾಲಿನಲ್ಲಿ 55,000 ಕೋಟಿ ರೂ. ಮೀಸಲಿಟ್ಟಿದೆ. ಇದರಲ್ಲಿ ಪ್ರತಿ ಕುಟುಂಬಕ್ಕೆ 5,000 ರೂ. ಸಿಗುತ್ತಿದೆ. ಪ್ರತಿಯಾಗಿ ಕರ್ನಾಟಕ ತಲಾ ಆದಾಯದಲ್ಲಿ ದೇಶದಲ್ಲೇ ನಂಬರ್ ಒನ್ ಸ್ಥಾನದಲ್ಲಿದೆ. ದುರದೃಷ್ಟವಶಾತ್ ನಾವು ಕಟ್ಟುವ ನಾಲ್ಕು ಲಕ್ಷ ಕೋಟಿ ರೂ. ತೆರಿಗೆ ಹಣದಲ್ಲಿ ಕೇಂದ್ರ ಸರ್ಕಾರ ಕೇವಲ 60,000 ಕೋಟಿ ಹಣವನ್ನು ಮಾತ್ರ ರಾಜ್ಯಕ್ಕೆ ವಾಪಸ್ ನೀಡುತ್ತಿದೆ. ನಮ್ಮ ರಾಜ್ಯದ ಅಭಿವೃದ್ದಿಗೆ ಕೇಂದ್ರವೇ ಅಡ್ಡಗಾಲಾಗಿದೆ," ಎಂದು ಸಚಿವರು ಆರೋಪಿಸಿದರು.