ಮಹಿಳಾ ಮೀಸಲಿಗೆ ಸೋಲು ಆಗಿರುವುದು ರಾಜ್ಯದಲ್ಲೂ ಕಿಚ್ಚು ಹಚ್ಚಿದೆ. ಕಾಂಗ್ರೆಸ್ ವಿರುದ್ಧ ಬಿಜೆಪಿ ಮಹಿಳಾ ಮಣಿಯರು ಸಿಡಿದೆದಿದ್ದಾರೆ. ರಾಜ್ಯ ವಿವಿಧೆಡೆ ಪ್ರತಿಭಟನೆ ಮಾಡಲಾಗುತ್ತಿದೆ. ಬೆಂಗಳೂರಿನ ಜೆಪಿ ನಗರದ ಆರ್.ವಿ.ಕಾಲೇಜು ಬಳಿ ಬಿಜೆಪಿ ಕಾರ್ಯಕರ್ತೆಯರು ಕಪ್ಪು ಪಟ್ಟಿ ಧರಿಸಿ ಕಾಂಗ್ರೆಸ್ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಸಂಸದ ತೇಜಸ್ವಿ ಸೂರ್ಯ ಭಾಗಿಯಾಗಿದ್ದು, ಹೆಣ್ಣು ಮಕ್ಕಳು ನಮ್ಮ ಜೊತೆ ಕೂರಬಾರದು ಅಂತ ಕಾಂಗ್ರೆಸ್ ವಿರೋಧ ಮಾಡುತ್ತಿದೆ. ನೂರಕ್ಕೆ ನೂರು ಈ ಬಿಲ್ ಜಾರಿ ಮಾಡುತ್ತೇವೆ. ಸ್ವಲ್ಪ ವಿಳಂಬ ಆಗಬಹುದು ಆದರೆ ಬಿಜೆಪಿ ಮಾಡುತ್ತದೆ ಎಂದು ಹೇಳಿದ್ದಾರೆ.
ಬಿಬಿಎಂಪಿ ತೆಗೆದು 5 ಮಹಾನಗರ ಪಾಲಿಕೆಗಳನ್ನಾಗಿ ಮಾಡಿದ್ದಾರೆ. ಬೆಂಗಳೂರಿನಲ್ಲಿ ಜನಸಂಖ್ಯೆ ಹೆಚ್ಚಳ ಆಗಿದೆ ಅಂತಾ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಹೇಳುತ್ತಾರೆ. 198 ಇದ್ದ ವಾರ್ಡ್ಗಳನ್ನು ಜಿಬಿಎ ಮಾಡಿ 369ಕ್ಕೆ ಹೆಚ್ಚಿಸಿದ್ದಾರೆ. ಬೆಂಗಳೂರಿನಲ್ಲಿ ಸ್ಥಳೀಯ ಸಂಸ್ಥೆಗಳ ಮಟ್ಟದಲ್ಲಿ ಡಿಲಿಮಿಟೇಶನ್ (ಕ್ಷೇತ್ರ ಮರು ವಿಂಗಡಣೆ) ಮಾಡಿದರೆ ತೊಂದರೆಯಿಲ್ಲ ಎನ್ನುವ ಕಾಂಗ್ರೆಸ್, ಸಂಸತ್ ಮಟ್ಟದಲ್ಲಿ ಮಾಡಿದರೆ ಇವರಿಗೆ ತೊಂದರೆ ಆಗುತ್ತಾ. ಇದರಲ್ಲಿ ಕಾಂಗ್ರೆಸ್ ಲಾಜಿಕ್ ಅರ್ಥ ಆಗುತ್ತಿಲ್ಲ ಎಂದು ಸಂಸದ ತೇಜಸ್ವಿ ಸೂರ್ಯ ಕಿಡಿಕಾರಿದ್ದಾರೆ. 2023ರಲ್ಲಿ ಬಿಲ್ ಪಾಸ್ ಆದಾಗ ಜಾರಿ ಮಾಡುವ ಉದ್ದೇಶ ಇತ್ತು. ಹೊಸ ಜನಗಣತಿ ಆಧಾರದ ಮೇಲೆ ಜಾರಿ ಮಾಡುವ ಉದ್ದೇಶ ಇತ್ತು. 2011ರ ಜನಗಣತಿ ಆಧಾರದಲ್ಲೇ ಮಹಿಳಾ ಮೀಸಲಾತಿ ಜಾರಿಗೆ ನಿರ್ಧರಿಸಿತ್ತು. ಅದರಂತೆ ಜಾರಿಗೆ ಮುಂದಾಗಿದಕ್ಕೆ ಅದಕ್ಕೂ ಕಾಂಗ್ರೆಸ್ ಕಲ್ಲುಹಾಕಿದೆ ಎಂದು ಅವರು ವಾಗ್ದಾಳಿ ಮಾಡಿದ್ದಾರೆ.