ಉಡುಪಿಯ ಮಲ್ಪೆ ಬೀಚ್ ಬಳಿ ಜಿಲ್ಲಾ ಬಿಜೆಪಿ ಹಾಗೂ ಹಿಂದೂ ಸಂಘಟನೆಗಳ ಮುಖಂಡ ಮಂಜುನಾಥ ಕೊಳ (ಮಂಜು ಕೊಳ) ಮೇಲೆ ಚೂರಿ ದಾಳಿ ನಡೆಯಿದ್ದು, ತೀವ್ರವಾಗಿ ಗಾಯಗೊಂಡ ಅವರು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಂಜು ಕೊಳರ ವೈಯಕ್ತಿಕ ಕಾರಣಕ್ಕೆ ಜೋಡಿಯೊಂದರ ವಿಚಾರಕ್ಕೆ ಸಂಬಂಧಿಸಿದಂತೆ ರಾಜಿ ಮಾತುಕತೆಗೆ ತೆರಳಿದ್ದರು. ಈ ವೇಳೆ ಯುವಕ ಹಾಗೂ ಮಂಜು ಕೊಳ ನಡುವೆ ಮಾತಿಗೆ ಮಾತು ಬೆಳೆದಿದೆ. ಇದರಿಂದ ಸಿಟ್ಟಾದ ಯುವಕ ತನ್ನ ಬಳಿಯಿದ್ದ ಚಾಕುವಿನಿಂದ ಏಕಾಏಕಿ ಹಲ್ಲೆ ನಡೆಸಿದ್ದಾನೆ.
ಜೋಡಿಯ ವಿಚಾರದಲ್ಲಿ ಸಮಾಧಾನ ಪಡಿಸುವ ವೇಳೆ ಸಿಟ್ಟಾದ ಯುವಕ ಮಂಜು ಕೊಳ ಅವರ ಹೊಟ್ಟೆಯ ಭಾಗಕ್ಕೆ ಚಾಕುವಿನಿಂದ ಇರಿದಿದ್ದಾನೆ. ಪರಿಣಾಮ ಹೊಟ್ಟೆಯ ಭಾಗಕ್ಕೆ ತೀವ ಗಾಯವಾಗಿದೆ. ಕೂಡಲೇ ಬೆಂಬಲಿಗರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಜೊತೆಗೆ ಮಂಜು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಸದ್ಯ ಈ ಘಟನೆಗೆ ಸಂಬಂಧಪಟ್ಟಂತೆ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದು, ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇತ್ತ ಮಂಜು ಕೊಳ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಘಟನೆಗೆ ಸಂಬಂಧಪಟ್ಟಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಪ್ರತಿಕ್ರಿಯಿಸಿದ್ದು, ಚೂರಿ ಇರಿತ ನಡೆಸಿದವನ ಬಂಧನ ಮಾಡಲಾಗಿದೆ. ಇದು ವೈಯಕ್ತಿಕ ಕಾರಣಕ್ಕೆ ನಡೆದ ಇರಿತವಾಗಿದ್ದು ಇದರಲ್ಲಿ ಕೋಮು ಸಂಘರ್ಷ ಇಲ್ಲ. ಅದನ್ನು ತರುವ ಪ್ರಯತ್ನಕ್ಕೂ ಅವಕಾಶ ನೀಡುವುದಿಲ್ಲ ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ತಿಳಿಸಿದರು.