ಬೆಂಗಳೂರಿನ ಆವಲಹಳ್ಳಿಯಲ್ಲಿ ಸಣ್ಣ ವಿವಾದವೊಂದು ಭೀಕರ ಹಲ್ಲೆಗೆ ತಿರುಗಿದ ಘಟನೆ ಬೆಳಕಿಗೆ ಬಂದಿದೆ. ಸ್ಕಿನ್ ಶೈನ್ ಫ್ಯಾಮಿಲಿ ಸಲೂನ್‌ನಲ್ಲಿ ಕೆಲಸ ಮಾಡುತ್ತಿದ್ದ ಬ್ಯೂಟಿಷಿಯನ್‌ಗೆ ಸಲೂನ್ ಮಾಲೀಕ ಮೋಹನ್ ಕುಮಾರ್ ಪ್ರಪೋಸ್ ಮಾಡಿದರೆಂಬ ಆರೋಪ ಕೇಳಿಬಂದಿದೆ. ಇದನ್ನು ನಿರಾಕರಿಸಿದ ಹಿನ್ನೆಲೆ, ಆಕೆಯನ್ನು ಕೆಲಸದಿಂದ ತೆಗೆದುಹಾಕಲಾಗಿದೆ ಎನ್ನಲಾಗಿದೆ.
ಈ ಘಟನೆಗೆ ಆಕ್ರೋಶಗೊಂಡ ಬ್ಯೂಟಿಷಿಯನ್ ಪತಿ, ತನ್ನ ಬೆಂಬಲಿಗರೊಂದಿಗೆ ಸಲೂನ್‌ಗೆ ನುಗ್ಗಿ ಮಾಲೀಕನ ಮೇಲೆ ಹಲ್ಲೆ ನಡೆಸಿದ್ದಾನೆ. ಗಲಾಟೆ ತಡೆಯಲು ಬಂದ ಮೋಹನ್ ಕುಮಾರ್ ಪತ್ನಿ ಶ್ರೀಜಾ ಮೇಲೂ ಹಲ್ಲೆ ನಡೆದಿದೆ. ಈ ವೇಳೆ ಸಲೂನ್‌ನಲ್ಲಿ ದಾಂಧಲೆ ನಡೆದಿದ್ದು, ಇಡೀ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆಯ ಸಂಬಂಧ ಮೋಹನ್ ಕುಮಾರ್ ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಗಳ ಪತ್ತೆಗೆ ಶೋಧ ಕಾರ್ಯ ಆರಂಭಿಸಿದ್ದಾರೆ.