2026-04-23 10:54:40

Bangalores historic Karaga Mahotsav|ಬೆಂಗಳೂರಿನ ಐತಿಹಾಸಿಕ ಕರಗ ಮಹೋತ್ಸವ|Speed News Kannada

Bangalores historic Karaga Mahotsav|ಬೆಂಗಳೂರಿನ ಐತಿಹಾಸಿಕ ಕರಗ ಮಹೋತ್ಸವ|Speed News Kannada

ಬೆಂಗಳೂರಿನ ಐತಿಹಾಸಿಕ ಹಾಗೂ ಸಾಂಪ್ರದಾಯಿಕ ಕರಗ ಮಹೋತ್ಸವವು ಬುಧವಾರ ತಡರಾತ್ರಿ ಅತ್ಯಂತ ಸಡಗರದಿಂದ ನೆರವೇರಿತು. ತಿಗಳರಪೇಟೆಯ ಧರ್ಮರಾಯಸ್ವಾಮಿ ದೇವಸ್ಥಾನದಲ್ಲಿ ಅರ್ಚಕ ಎ. ಜ್ಞಾನೇಂದ್ರ ಅವರು ಸತತ 16ನೇ ಬಾರಿಗೆ ಮಲ್ಲಿಗೆ ಹೂವಿನಿಂದ ಅಲಂಕೃತಗೊಂಡ ದ್ರೌಪದಿದೇವಿಯ ಕರಗವನ್ನು ಹೊತ್ತು ಸಾಗಿದರು. ವೀರಕುಮಾರರ ಖಡ್ಗಗಳ ಅಬ್ಬರ, ಭಕ್ತರ ಗೋವಿಂದ ನಾಮಸ್ಮರಣೆ ಮತ್ತು ಮಲ್ಲಿಗೆ ಹೂವಿನ ಸಮರ್ಪಣೆಯ ನಡುವೆ ಹುಣ್ಣಿಮೆಯ ಬೆಳಕಿನಲ್ಲಿ ಕರಗವು ನಗರದ ಪ್ರಮುಖ ರಸ್ತೆಗಳಲ್ಲಿ ಅದ್ಧೂರಿಯಾಗಿ ಮೆರವಣಿಗೆ ಸಾಗಿತು.

ಈ ಮಹೋತ್ಸವದ ಪ್ರಮುಖ ವಿಶೇಷತೆಯೆಂದರೆ ಕೋಮು ಸೌಹಾರ್ದತೆಯ ಪ್ರತೀಕವಾಗಿ ಮಸ್ತಾನ್ ಸಾಬ್ ದರ್ಗಾಕ್ಕೆ ಕರಗ ಭೇಟಿ ನೀಡಿದ್ದು. ತಲತಲಾಂತರಗಳಿಂದ ನಡೆದುಬಂದ ಸಂಪ್ರದಾಯದಂತೆ ದರ್ಗಾದಲ್ಲಿ ಮೂರು ಸುತ್ತು ಪ್ರದಕ್ಷಿಣೆ ಹಾಕುವ ಮೂಲಕ ಭಕ್ತಿ ಮೆರೆಯಲಾಯಿತು. ದರ್ಗಾದ ಮುಜಾವರ್ ಪರ್ವೀಜ್ ಅಹ್ಮದ್ ಅವರು ಈ ಪರಂಪರೆಯನ್ನು ಸ್ಮರಿಸುತ್ತಾ, ಮಸ್ತಾನ್ ಸಾಬ್ ಮತ್ತು ಧರ್ಮರಾಯಸ್ವಾಮಿಯ ನಡುವಿನ ಬಾಂಧವ್ಯಕ್ಕೆ ಸಾಕ್ಷಿಯಾಗಿ ದರ್ಗಾದಲ್ಲೂ ವಿಶೇಷ ಸಿದ್ಧತೆ ಮತ್ತು ಅಲಂಕಾರಗಳನ್ನು ಮಾಡಲಾಗಿತ್ತು ಎಂದು ಹರ್ಷ ವ್ಯಕ್ತಪಡಿಸಿದರು.

ನಗರದ ಸುಮಾರು 25 ಪೇಟೆಗಳಲ್ಲಿ ಸಾಗಿದ ಈ ಮೆರವಣಿಗೆಯನ್ನು ನೋಡಲು ಸಾವಿರಾರು ಭಕ್ತರು ಸೇರಿದ್ದರು. ಈ ಸಂದರ್ಭದಲ್ಲಿ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ಶಾಸಕರಾದ ಗರುಡಾಚಾರ್ ಮತ್ತು ಎನ್.ಎ. ಹ್ಯಾರಿಸ್ ಸೇರಿದಂತೆ ಹಲವು ಗಣ್ಯರು ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ರಾತ್ರಿಯಿಡೀ ನಡೆದ ಈ ವೈಭವಯುತ ಉತ್ಸವವು ಬೆಂಗಳೂರಿನ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಮತ್ತೊಮ್ಮೆ ಅನಾವರಣಗೊಳಿಸಿತು.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.