ಬೆಂಗಳೂರು ಮತ್ತು ಮುಂಬೈ ನಡುವೆ ಬಹುನಿರೀಕ್ಷಿತ ವಂದೇ ಭಾರತ್ ಸ್ಲೀಪರ್ ರೈಲು ಸಂಚಾರಕ್ಕೆ ರೈಲ್ವೆ ಇಲಾಖೆ ಹಸಿರು ನಿಶಾನೆ ತೋರಿಸಿದೆ. ಈ ಕುರಿತು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಸಂಸದ ಪಿ.ಸಿ. ಮೋಹನ್ ಅವರಿಗೆ ಪತ್ರ ಬರೆಯುವ ಮೂಲಕ ಅಧಿಕೃತ ಮಾಹಿತಿ ನೀಡಿದ್ದಾರೆ. ಸದ್ಯ ಈ ಮಾರ್ಗದಲ್ಲಿ ಚಲಿಸುವ ರೈಲುಗಳು ತಲುಪಲು 24 ರಿಂದ 30 ಗಂಟೆಗಳ ಸುದೀರ್ಘ ಸಮಯ ತೆಗೆದುಕೊಳ್ಳುತ್ತಿದ್ದು, ಹೊಸ ವಂದೇ ಭಾರತ್ ರೈಲು ಈ ಪ್ರಯಾಣದ ಅವಧಿಯನ್ನು ಗಣನೀಯವಾಗಿ ಕಡಿಮೆ ಮಾಡಲಿದೆ.
ನೈಋತ್ಯ ರೈಲ್ವೆಯ ಸ್ಥಾಯಿ ಸಮಿತಿ ಸಭೆಯ ಸಂದರ್ಭದಲ್ಲಿ ಸಂಸದ ಪಿ.ಸಿ. ಮೋಹನ್ ಅವರು ಈ ರೈಲಿಗಾಗಿ ಬೇಡಿಕೆ ಇಟ್ಟಿದ್ದರು. ಬೆಂಗಳೂರಿನ ಎಸ್‌ಎಂವಿಟಿ (SMVT) ನಿಲ್ದಾಣವನ್ನು ಮೂಲ ಸ್ಥಾನವಾಗಿರಿಸಿಕೊಂಡು, ಬಸ್‌ಗಳಿಗಿಂತ ವೇಗವಾಗಿ ಚಲಿಸುವ ರೈಲನ್ನು ಪರಿಚಯಿಸಬೇಕೆಂದು ಅವರು ಒತ್ತಾಯಿಸಿದ್ದರು. ಖಾಸಗಿ ಬಸ್‌ಗಳು 16-18 ಗಂಟೆಗಳಲ್ಲಿ ಮುಂಬೈ ತಲುಪುತ್ತಿರುವುದನ್ನು ಗಮನಿಸಿ, ಪ್ರಯಾಣಿಕರ ಅನುಕೂಲಕ್ಕಾಗಿ ಈ ವೇಗದ ಸ್ಲೀಪರ್ ರೈಲು ಸೇವೆಯನ್ನು ಆರಂಭಿಸಲು ಈಗ ಅನುಮತಿ ನೀಡಲಾಗಿದೆ.