ಚಂದ್ರನ ಅಂಗಳಕ್ಕೆ ಮತ್ತೆ ಮಾನವನನ್ನು ಇಳಿಸುವ ನಾಸಾದ ಆರ್ಟೆಮಿಸ್ ಮಿಷನ್ ಬಾಹ್ಯಾಕಾಶ ನೌಕೆಯಲ್ಲಿರುವ ಗಗನಯಾನಿಗಳು ಮಾರ್ಗಮಧ್ಯದಿಂದ ಚಂದ್ರನ ಮತ್ತೊಂದು ಬದಿಯ ಅಪರೂಪದ ಚಿತ್ರಗಳನ್ನು ಸೆರೆಹಿಡಿದಿದ್ದಾರೆ. ಈ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ನಾಸಾ, 'ಈ ಚಿತ್ರವು ಚಂದ್ರನ ಮತ್ತೊಂದು ಭಾಗವನ್ನು ತೋರಿಸುತ್ತದೆ. ಇದನ್ನು ನೋಡಲು ಈವರೆಗೆ ಸಾಧ್ಯವಾಗಿರಲಿಲ್ಲ' ಎಂದು ಹೇಳಿದೆ. ಚಂದ್ರನತ್ತ ಹೊರಟಿರುವ ಓರಿಯನ್ ಬಾಹ್ಯಾಕಾಶ ನೌಕೆಯಲ್ಲಿ ಮೂವರು ಅಮೆರಿಕನ್ನರು ಮತ್ತು ಒಬ್ಬ ಕೆನಡಾದ ಗಗನಯಾನಿ ಇದ್ದಾರೆ. ಸೋಮವಾರ ಇದು ತನ್ನ ಗಮ್ಯಸ್ಥಾನವನ್ನು ತಲುಪುವ ನಿರೀಕ್ಷೆ ಇದೆ. ಕೆನಡಾದ ಜೆರೆಮಿ ಹ್ಯಾನ್ಸೆನ್ ಮತ್ತು ಅಮೆರಿಕದ ವಿಕ್ಟರ್ ಗ್ಲೋವರ್, ರೀಡ್ ವೈಸ್‌ಮನ್ ಮತ್ತು ಕ್ರಿಸ್ಟಿನಾ ಕೋಚ್ ಇದರಲ್ಲಿರುವ ಯಾನಿಗಳು. 1972ರ ಅಪೋಲೋ 17 ಸಿಬ್ಬಂದಿಯ ನಂತರ ಮನುಷ್ಯರನ್ನು ಹೊತ್ತು ಚಂದ್ರನತ್ತ ಪ್ರಯಾಣಿಸುತ್ತಿರುವ 2ನೇ ನೌಕೆ ಇದಾಗಿದೆ.