2026-04-24 04:12:40

Apartment association accused of fraud worth crores | ಬೆಂಗಳೂರು ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ನಿಂದ ಕೋಟಿ ಕೋಟಿ ವಂಚನೆ ಆರೋಪ 18 ಜನರ ವಿರುದ್ಧ ಪ್ರಕರಣ | Speed news Kannada

Apartment association accused of fraud worth crores | ಬೆಂಗಳೂರು ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ನಿಂದ ಕೋಟಿ ಕೋಟಿ ವಂಚನೆ ಆರೋಪ 18 ಜನರ ವಿರುದ್ಧ ಪ್ರಕರಣ | Speed news Kannada

ಬೆಂಗಳೂರು, ಮಾರ್ಚ್ 20: ಬೆಂಗಳೂರು ಉತ್ತರ ತಾಲೂಕಿನ ಶೆಟ್ಟಿಹಳ್ಳಿಯಲ್ಲಿರುವ ಪ್ರತಿಷ್ಠಿತ ಪ್ರಿನ್ಸ್ ಟೌನ್ ಅಪಾರ್ಟ್‌ಮೆಂಟ್‌ನಲ್ಲಿ ಕೋಟಿ ಕೋಟಿ ಹಣ ವಂಚನೆ ಆರೋಪ ಕೇಳಿಬಂದಿದೆ. ಸುಮಾರು 700 ಫ್ಲಾಟ್‌ಗಳಿರುವ ಈ ಅಪಾರ್ಟ್‌ಮೆಂಟ್‌ನಲ್ಲಿ ಅಸೋಸಿಯೇಷನ್ ಸದಸ್ಯರು ಹಣ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ನಿವಾಸಿಗಳು ಆರೋಪಿಸಿದ್ದಾರೆ. ಈ ಬಗ್ಗೆ ಅಪಾರ್ಟ್‌ ಮೆಂಟ್ ನಿವಾಸಿ ಹಾಗೂ ವಕೀಲೆ ನಿಶಾ ಎಂಬವರು ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಅಸೋಸಿಯೇಷನ್ ಅಧ್ಯಕ್ಷ ಅರುಣ್ ಕುಲಕರ್ಣಿ, ಕಾರ್ಯದರ್ಶಿ ಅಲೆಕ್ಸ್, ಖಜಾಂಚಿ ಪ್ರವೀಣ್ ನಾಯ್ಕರ್ ಸೇರಿದಂತೆ ಒಟ್ಟು 18 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಮಾಹಿತಿಯ ಪ್ರಕಾರ, ಪ್ರತಿ ಫ್ಯಾಟ್‌ನಿಂದ ವರ್ಷಕ್ಕೆ ಸುಮಾರು 60 ಸಾವಿರ ರೂಪಾಯಿ ಸಂಗ್ರಹಿಸಲಾಗುತ್ತಿದ್ದು, 700 ಫ್ಲಾಟ್‌ಗಳಿಂದ ಒಟ್ಟಾರೆ ಸುಮಾರು 3.6 ಕೋಟಿ ರೂಪಾಯಿ ವಸೂಲಿ ಮಾಡಲಾಗುತ್ತದೆ. ಆದರೆ, ಈ ಹಣವನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಲು ಬಳಸದೇ, ಲೆಕ್ಕಪತ್ರಗಳಲ್ಲಿ ಅಕ್ರಮ ಎಸಗಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ. ಕಳೆದ ಎರಡು ವರ್ಷಗಳಲ್ಲಿ ಸುಮಾರು 1.73 ಕೋಟಿ ರೂಪಾಯಿ ವಂಚನೆ ನಡೆದಿರುವ ಸಾಧ್ಯತೆ ಇದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಕೆಲವು ಖರ್ಚುಗಳನ್ನು ತಪ್ಪಾಗಿ ತೋರಿಸಲಾಗಿದೆ. ಉದಾಹರಣೆಗೆ, ವಾಟರ್‌ಮ್ಯಾನ್‌ಗೆ ಅನಗತ್ಯವಾಗಿ 2 ಲಕ್ಷ ರೂಪಾಯಿ ನೀಡಲಾಗಿದೆ ಎಂದು ದಾಖಲಿಸಿರುವುದು ಗಮನಕ್ಕೆ ಬಂದಿದೆ. ಜೊತೆಗೆ, ಆಡಿಟ್ ಖರ್ಚನ್ನು ಒಂದು ವರ್ಷ 35 ಲಕ್ಷ ರೂಪಾಯಿ, ಮತ್ತೊಂದು ವರ್ಷ 24 ಲಕ್ಷ ರೂಪಾಯಿ ಎಂದು ತೋರಿಸಿರುವುದೂ ಅನುಮಾನಕ್ಕೆ ಕಾರಣವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇದಲ್ಲದೆ, ಅಸೋಸಿಯೇಷನ್ ಹಣವನ್ನು ಆರೋಪಿಗಳು ತಮ್ಮ ಕುಟುಂಬದ ಸದಸ್ಯರ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡಿದ್ದಾರೆ. ಹೆಂಡತಿ, ಮನೆ ಕೆಲಸದವರ ಬ್ಯಾಂಕ್ ಖಾತೆಗಳಿಗೂ ವರ್ಗಾವಣೆ ಮಾಡಿಸಿಕೊಂಡಿದ್ದಾರೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಬಾಗಲಗುಂಟೆ ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದು, ನೋಟಿಸ್ ನೀಡಲು ಸಿದ್ಧತೆ ನಡೆಸುತ್ತಿದ್ದಾರೆ. ಒಟ್ಟಾರೆ, ಪ್ರತಿಷ್ಠಿತ ಅಪಾರ್ಟ್‌ಮೆಂಟ್‌ನಲ್ಲಿ ಇಷ್ಟು ದೊಡ್ಡ ಪ್ರಮಾಣದ ಹಣ ವಂಚನೆ ಆರೋಪ ಕೇಳಿಬಂದಿರುವುದು ನಿವಾಸಿಗಳಲ್ಲಿ ಆತಂಕ ಮತ್ತು ಅಸಮಾಧಾನ ಉಂಟುಮಾಡಿದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.