ಮಾಜಿ ಡಾನ್ ಮುತ್ತಪ್ಪ ರೈ ಅವರ ಪುತ್ರ ರಿಕ್ಕಿ ರೈಗೆ ಮತ್ತೆ ಕಾನೂನು ಸಂಕಷ್ಟ ಎದುರಾಗಿದೆ. ಕಬ್ಬನ್ ಪಾರ್ಕ್ ಸಂಚಾರಿ ಪೊಲೀಸರು ನಕಲಿ ನಂಬರ್ ಪ್ಲೇಟ್ ಬಳಕೆ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದಾರೆ. ಐಷಾರಾಮಿ ಲ್ಯಾಂಬೋರ್ಗಿನಿ ಕಾರಿನಲ್ಲಿ ಹೈ-ಸ್ಪೀಡ್ ಡ್ರಿಫ್ಟಿಂಗ್ ಸ್ಟಂಟ್ ನಡೆಸಿದ ವಿಡಿಯೋ ಇತ್ತೀಚೆಗೆ ವೈರಲ್ ಆಗಿ, ಈ ಸಂಬಂಧ ಈಗಾಗಲೇ ಪ್ರಕರಣ ದಾಖಲಾಗಿತ್ತು. ಇದೇ ಕಾರಿನ ನಂಬರ್ ಪ್ಲೇಟ್ ಕುರಿತಾಗಿ ಮತ್ತೊಂದು ಗಂಭೀರ ಆರೋಪ ಹೊರಬಿದ್ದಿದೆ.
ದೆಹಲಿಯಲ್ಲಿ ಖರೀದಿಸಿದ ಲ್ಯಾಂಬೋರ್ಗಿನಿ ಕಾರಿಗೆ KA 05 NR 0009 ಎಂಬ ಫ್ಯಾನ್ಸಿ ನಂಬರ್ ಪಡೆಯಲು ರಿಕ್ಕಿ ರೈ 5 ಲಕ್ಷ ರೂಪಾಯಿ ಪಾವತಿಸಿದ್ದರು. ಆದರೆ, ಆ ನಂಬರ್‌ನನ್ನು ಅಧಿಕೃತವಾಗಿ ನೋಂದಣಿ ಮಾಡಿಸದೇ ಕಾರಿಗೆ ಅಳವಡಿಸಿ ರಸ್ತೆಗಿಳಿಸಿದ್ದರೆಂಬ ಆರೋಪ ಇದೆ.ನಿಯಮದ ಪ್ರಕಾರ ನೋಂದಣಿ ಪ್ರಕ್ರಿಯೆ ಪೂರ್ಣಗೊಳ್ಳುವ ಮೊದಲು ನಂಬರ್ ಪ್ಲೇಟ್ ಬಳಸುವುದು ಕಾನೂನುಬಾಹಿರ. ಈ ಹಿನ್ನೆಲೆ ಪೊಲೀಸರು ಕಾರನ್ನು ಈಗಾಗಲೇ ಸೀಜ್ ಮಾಡಿದ್ದು, ಕಳೆದ ಅಕ್ಟೋಬರ್‌ನಲ್ಲಿ ಆರ್‌ಟಿಒ ಅಧಿಕಾರಿಗಳು 35 ಲಕ್ಷ ರೂಪಾಯಿ ದಂಡ ವಿಧಿಸಿದ್ದರು.
ಇದಲ್ಲದೆ, ಬೆಂಗಳೂರಿನ ಅನಿಲ್ ಕುಂಬ್ಳೆ ಸರ್ಕಲ್ ಬಳಿ ನಡೆದ ಹೈ-ಸ್ಪೀಡ್ ಡ್ರಿಫ್ಟಿಂಗ್ ಪ್ರಕರಣವು ಸಾರ್ವಜನಿಕರ ಸುರಕ್ಷತೆಗೆ ಅಪಾಯ ತಂದೊಡ್ಡಿದ ಆರೋಪಕ್ಕೂ ಕಾರಣವಾಗಿತ್ತು. ಆದರೆ, ಈ ಘಟನೆ ಉದ್ದೇಶಪೂರ್ವಕವಲ್ಲ, ಕಾರಿನ ಬ್ರೇಕ್ ಸಮಸ್ಯೆ ಅಥವಾ ರಸ್ತೆಯ ಮರಳಿನಿಂದ ಉಂಟಾದ ಆಕಸ್ಮಿಕ ಸ್ಕಿಡ್ ಎಂದು ರಿಕ್ಕಿ ರೈ ಪರ ವಕೀಲರು ವಾದಿಸಿದ್ದಾರೆ.ಈ ಎಲ್ಲಾ ಪ್ರಕರಣಗಳು ದಾಖಲಾಗುತ್ತಿದ್ದಂತೆ ರಿಕ್ಕಿ ರೈ ರಷ್ಯಾಕ್ಕೆ ತೆರಳಿದ್ದಾರೆಯೆಂಬ ಮಾಹಿತಿ ದೊರಕಿದ್ದು, ಇದೀಗ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಸೂಚಿಸಿದ್ದಾರೆ.ಮುಂದಿನ ತನಿಖೆಯಲ್ಲಿ ಇನ್ನಷ್ಟು ಮಾಹಿತಿ ಬಹಿರಂಗವಾಗುವ ಸಾಧ್ಯತೆ ಇದೆ.