ಬೆಂಗಳೂರಿನ ಮೈಸೂರು ರಸ್ತೆ ಸ್ಯಾಟಲೈಟ್ ಬಸ್ ನಿಲ್ದಾಣದ ಸಿಗ್ನಲ್ ಬಳಿ ಇಂದು ಮುಂಜಾನೆ ಭೀಕರ ಅಪಘಾತ ಸಂಭವಿಸಿದೆ. ಸಿಗ್ನಲ್‌ನಲ್ಲಿ ನಿಂತಿದ್ದ ಲಾರಿಗೆ ಹಿಂಬದಿಯಿಂದ ಬಂದ ಮತ್ತೊಂದು ಲಾರಿ ವೇಗವಾಗಿ ಡಿಕ್ಕಿ ಹೊಡೆದ ಪರಿಣಾಮ, ಹಿಂಬದಿ ಲಾರಿಯ ಚಾಲಕ ವಿಜಯ್‌ಕುಮಾರ್ (60) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತ ಚಾಲಕ ಕೋಲಾರದ ಮಾಲೂರಿನಿಂದ ಆರ್.ಆರ್. ನಗರದ ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ಗೆ ತರಕಾರಿ ಪೂರೈಸಲು ಬರುತ್ತಿದ್ದಾಗ ಮುಂಜಾನೆ 4 ಗಂಟೆ ಸುಮಾರಿಗೆ ಈ ದುರ್ಘಟನೆ ನಡೆದಿದೆ.
ಅಪಘಾತಕ್ಕೂ ಮುನ್ನ ಹಿಂಬದಿ ಲಾರಿಯು ಫ್ಲೈಓವರ್ ಇಳಿಯುವಾಗ ದಾರಿಯುದ್ದಕ್ಕೂ ಇತರ ವಾಹನಗಳಿಗೆ ಸವರಿಕೊಂಡು ಬಂದಿತ್ತು ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ಲಾರಿಯ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು, ಚಾಲಕನ ದೇಹ ನಜ್ಜುಗುಜ್ಜಾಗಿದೆ. ಸದ್ಯ ಸಂಚಾರಿ ಪೊಲೀಸರು ಸ್ಥಳಕ್ಕೆ ಧಾವಿಸಿ ಅಪಘಾತಕ್ಕೊಳಗಾದ ವಾಹನಗಳನ್ನು ತೆರವುಗೊಳಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕೆ.ಆರ್. ಮಾರುಕಟ್ಟೆಯ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಾಗಿದೆ.