ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ದೊಡ್ಡ ಹೆಜ್ಜೂರು ಗ್ರಾಮದಲ್ಲಿ ಆರುವರೆ ತಿಂಗಳ ಮಗು 'ಚಿನ್ಮಯಿಗೌಡ' ಒಣಗಿದ ದಾಸವಾಳದ ಹೂವನ್ನು ನುಂಗಿ ಉಸಿರುಗಟ್ಟಿ ಸಾವನ್ನಪ್ಪಿರುವ ಅತ್ಯಂತ ದುರದೃಷ್ಟಕರ ಘಟನೆ ನಡೆದಿದೆ. ಮನೆಯ ಹೊಸಲಿನಲ್ಲಿ ಪೂಜೆಗಾಗಿ ಇಟ್ಟಿದ್ದ ಒಣಗಿದ ದಾಸವಾಳದ ಹೂವಿನೊಂದಿಗೆ ಮಗು ಆಟವಾಡುತ್ತಿತ್ತು. ಈ ಸಮಯದಲ್ಲಿ ಅಕಸ್ಮಾತ್ತಾಗಿ ಹೂವನ್ನು ನುಂಗಿದ ಪರಿಣಾಮವಾಗಿ, ಅದು ಮಗುವಿನ ಗಂಟಲಿನಲ್ಲಿ ಸಿಲುಕಿಕೊಂಡು ತೀವ್ರವಾದ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ.
ಘಟನೆಯನ್ನು ಗಮನಿಸಿದ ತಕ್ಷಣ ಪೋಷಕರು ಮಗುವನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರಾದರೂ, ಚಿಕಿತ್ಸೆ ಫಲಕಾರಿಯಾಗದೆ ಮಗು ಅಸುನೀಗಿದೆ. ಗಂಟಲಿನಲ್ಲಿ ಹೂವು ಸಿಲುಕಿದ್ದರಿಂದ ಉಸಿರುಗಟ್ಟಿ ಮಗು ಮೃತಪಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಹೃದಯವಿದ್ರಾವಕ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.