ಇಂಡಿಯನ್ ಪ್ರೀಮಿಯರ್ ಲೀಗ್ 19ನೇ ಆವೃತ್ತಿಯಲ್ಲಿ ಪಂದ್ಯದ ಶಿಸ್ತು ಮತ್ತು ಸಮಯ ಪಾಲನೆಯನ್ನು ಕಾಪಾಡಿಕೊಳ್ಳಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿದೆ. ಮುಖ್ಯವಾಗಿ ಪಂದ್ಯದ ವೇಳೆ ತಂಡದ ‘ಬೆಂಚ್ ಆಟಗಾರರ’ (ಆಡದ ಆಟಗಾರರು) ಅನಗತ್ಯ ಓಡಾಟಕ್ಕೆ ಬಿಸಿಸಿಐ ಕಡಿವಾಣ ಹಾಕಿದೆ. ಪಂದ್ಯದ ವೇಳೆ ಮೈದಾನದ ಒಳಗೆ ಮತ್ತು ಬೌಂಡರಿ ಗೆರೆಯ ಸುತ್ತ ಉಂಟಾಗುವ ಗೊಂದಲಗಳನ್ನು ತಪ್ಪಿಸಲು ಈ ಕೆಳಗಿನ ಹೊಸ ನಿಯಮಗಳನ್ನು ಜಾರಿಗೆ ತರಲಾಗಿದೆ
ಐಪಿಎಲ್ ಟೂರ್ನಿಯ ನಡುವೆ BCCI ಐದು ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಅವುಗಳೆಂದರೆ..
ಮೈದಾನ ಪ್ರವೇಶಕ್ಕೆ ನಿರ್ಬಂಧ: ತಂಡದ ಪಟ್ಟಿಯಲ್ಲಿ ಹೆಸರಿಸಲಾದ 16 ಆಟಗಾರರಿಗೆ (ಇಂಪ್ಯಾಕ್ಟ್ ಪ್ಲೇಯರ್ ಸೇರಿ) ಮಾತ್ರ ಮೈದಾನದ ಒಳಗೆ ಪ್ರವೇಶಿಸಲು ಅನುಮತಿ ಇರುತ್ತದೆ. ಈ 16 ಆಟಗಾರರ ಪಟ್ಟಿಯಲ್ಲಿ ಇಲ್ಲದ ಉಳಿದ ಆಟಗಾರರು ಪಂದ್ಯ ನಡೆಯುವಾಗ ಡ್ರಿಂಕ್ಸ್ ತರುವುದು, ಬ್ಯಾಟ್ ನೀಡುವುದು ಅಥವಾ ಸಂದೇಶ ರವಾನಿಸಲು ಮೈದಾನ ಪ್ರವೇಶಿಸುವಂತಿಲ್ಲ.
ಬೌಂಡರಿ ಲೈನ್ ಬಳಿ ಕೇವಲ ಐವರು: ಪಂದ್ಯದ ವೇಳೆ ಬೌಂಡರಿ ಲೈನ್ ಸುತ್ತ ತರಬೇತಿ ಬಿಬ್ಸ್ (Bibs) ಧರಿಸಿ ಓಡಾಡುವ ಆಟಗಾರರ ಸಂಖ್ಯೆಯನ್ನು ಐದಕ್ಕೆ (5) ಸೀಮಿತಗೊಳಿಸಲಾಗಿದೆ. ಈ ಐವರು ಆಟಗಾರರು ನಾಮನಿರ್ದೇಶಿತ 16 ಆಟಗಾರರ ಪೈಕಿ ಇರಬಹುದು ಅಥವಾ ತಂಡದ ಇತರೆ ಆಟಗಾರರಾಗಿರಬಹುದು.
ಡಗೌಟ್ ನಿಯಮ: ಬೌಂಡರಿ ಲೈನ್ ಸುತ್ತ ತರಬೇತಿ ಬಿಬ್ಸ್ ಧರಿಸಿದ ಆಟಗಾರರನ್ನು ಬಿಟ್ಟು ಉಳಿದ ಎಲ್ಲಾ ಆಟಗಾರರು ಕಡ್ಡಾಯವಾಗಿ ತಂಡದ ಡಗೌಟ್‌ನಲ್ಲೇ ಇರಬೇಕು.
ಜಾಹೀರಾತು ಫಲಕಗಳ ನಿಯಮ: ಬೌಂಡರಿ ಲೈನ್ ಮತ್ತು ಎಲ್ಇಡಿ (LED) ಜಾಹೀರಾತು ಫಲಕಗಳ ನಡುವಿನ ಜಾಗದಲ್ಲಿ ಆಟಗಾರರು ಅನಗತ್ಯವಾಗಿ ಓಡಾಡುವಂತಿಲ್ಲ.
ಐಪಿಎಲ್ ಪಂದ್ಯಗಳು ಜಾಗತಿಕ ಮಟ್ಟದಲ್ಲಿ ದೊಡ್ಡ ಪ್ರಭಾವ ಬೀರುತ್ತಿರುವುದರಿಂದ, ಪಂದ್ಯದ ಘನತೆ ಮತ್ತು ವೃತ್ತಿಪರತೆಯನ್ನು ಕಾಪಾಡಿಕೊಳ್ಳಲು ಈ ಬದಲಾವಣೆಗಳು ಅನಿವಾರ್ಯ ಎಂದು ಬಿಸಿಸಿಐ ಅಭಿಪ್ರಾಯಪಟ್ಟಿದೆ. ಈ ನಿಯಮಗಳನ್ನು ಉಲ್ಲಂಘಿಸುವ ತಂಡಗಳಿಗೆ ಕಠಿಣ ದಂಡ ವಿಧಿಸುವ ಸಾಧ್ಯತೆಯೂ ಇದೆ.