ಸಿಎಂ ಕಪ್ ಶಟಲ್ ಬ್ಯಾಡ್ಮಿಂಟನ್ ಕ್ರೀಡಾಕೂಟದ ಮತ್ತೊಂದು ವಿಶೇಷವೆಂದರೆ ಪ್ರತಿ ಕ್ಷೇತ್ರದವರು ಒಂದೇ ತಂಡದಲ್ಲಿ ಆಡುತ್ತಿಲ್ಲ. ಬದಲಿಗೆ, ಎಲ್ಲರೂ ಒಂದೊಂದು ತಂಡದಿಂದ ಒಟ್ಟಾಗಿ ಕಣಕ್ಕಿಳಿಯುತ್ತಿದ್ದಾರೆ. ಒಟ್ಟು 8 ಫ್ರಾಂಚೈಸಿ ತಂಡಗಳಿರಲಿದ್ದು, ಪ್ರತಿ ತಂಡಕ್ಕೂ ಪ್ರತ್ಯೇಕ ಮಾಲೀಕರಿರಲಿದ್ದಾರೆ. ಜತೆಗೆ ಪ್ರತಿ ತಂಡದಲ್ಲೂ ಪುರುಷ ಮತ್ತು ಮಹಿಳಾ ಆಟಗಾರ್ತಿಯರಂತೆ ಒಟ್ಟು 15 ಆಟಗಾರರಿರಲಿದ್ದಾರೆ. ಹಾಗೆಯೇ, ಪ್ರತಿ ತಂಡದಲ್ಲೂ ಜನಪ್ರತಿನಿಧಿಗಳು, ಐಎಎಸ್, ಐಪಿಎಸ್, ಕೆಎಎಸ್, ಪೊಲೀಸ್, ಸಚಿವಾಲಯದ ಅಧಿಕಾರಿಗಳು, ವೈದ್ಯರು, ಚಲನಚಿತ್ರ ನಟ-ನಟಿಯರು ಮತ್ತು ಪತ್ರಕರ್ತ ಆಟಗಾರರಿರಲಿದ್ದಾರೆ.
ಪ್ರತಿ ತಂಡಕ್ಕೂ ಒಬ್ಬರು ಕ್ಯಾಪ್ಟನ್, ಒಬ್ಬರು ವೈಸ್-ಕ್ಯಾಪ್ಟನ್ ಇರಲಿದ್ದಾರೆ. ಅವರ ಜತೆಗೆ ಚಲನಚಿತ್ರ ರಂಗದ ಒಬ್ಬರು ಐಕಾನ್ ಪ್ಲೇಯರ್ ಆಗಿರಲಿದ್ದಾರೆ. ಪ್ರತಿ ತಂಡಕ್ಕೂ ತಲಾ ಒಬ್ಬರು ಶಾಸಕರು (ಜನಪ್ರತಿನಿಧಿ), ಐಎಎಸ್, ಐಪಿಎಸ್, ಪೊಲೀಸ್ ಅಧಿಕಾರಿಗಳು, ಸಚಿವಾಲಯದ ಅಧಿಕಾರಿಗಳು, ವೈದ್ಯರು, ಮಾಧ್ಯಮ ಪ್ರತಿನಿಧಿ ಹಾಗೂ ಚಲನಚಿತ್ರ ರಂಗದವರು ಆಟಗಾರರಾಗಿ ಆಯ್ಕೆ ಮಾಡಲಾಗಿದೆ. ಪಂದ್ಯಾವಳಿಯು ಮೆನ್ಸ್ ಸಿಂಗಲ್ಸ್, ಮೆನ್ಸ್ ಡಬಲ್ಸ್, ವುಮೆನ್ ಸಿಂಗಲ್ಸ್, ವುಮೆನ್ಸ್ ಡಬಲ್ಸ್, ಮಿಕ್ಸೆಡ್ ಡಬಲ್ಸ್ ಮತ್ತು ಪವರ್ ಡಬಲ್ಸ್ ಕೆಟಗರಿಯಲ್ಲಿ ನಡೆಯಲಿದೆ. ಇದರ ಜತೆಗೆ ಗೇಮ್ ಚೇಂಜರ್ ಎನ್ನುವ ಹೊಸ ಪರಿಕಲ್ಪನೆಯನ್ನೂ ಕ್ರೀಡಾಕೂಟದಲ್ಲಿ ಪರಿಚಯಿಸಲಾಗುತ್ತಿದೆ. ಕ್ರೀಡಾಕೂಟದ ವಿಜೇತ ತಂಡಕ್ಕೆ 7 ಲಕ್ಷ ರೂಪಾಯಿ ನಗದು ಮತ್ತು ಆಕರ್ಷಕ ಟ್ರೋಫಿ ನೀಡಲಾಗುತ್ತಿದೆ.
ಸಿಎಂ ಕಪ್ 2026 ಕ್ರೀಡಾಕೂಟವು ಫೆ. 21 (ಶನಿವಾರ) ಮತ್ತು ಫೆ. 22 (ಭಾನುವಾರ)ರಂದು ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್‌ನಲ್ಲಿ ನಡೆಯಲಿದೆ. ಅದರ ಪೂರ್ವಭಾವಿಯಾಗಿ ಭಾನುವಾರ (ಜ. 25)ದಂದು ಅರಮನೆ ಮೈದಾನದ ವೈಟ್‌ಪೆಟಲ್ಸ್‌ನಲ್ಲಿ ಆಟಗಾರರ ಆಯ್ಕೆ ಮತ್ತು ಜೆರ್ಸಿ ಅನಾವರಣ ಮಾಡಲಾಯಿತು. ರಾಜ್ಯದಲ್ಲಿಯೇ ವಿಭಿನ್ನ ಮತ್ತು ವಿಶೇಷ ರೀತಿಯಲ್ಲಿ ಸಿಎಂ ಕಪ್ ಕ್ರೀಡಾಕೂಟ ಆಯೋಜಿಸಲಾಗುತ್ತಿದೆ. ರಾಜ್ಯದ ಅಭಿವೃದ್ಧಿಗೆ ತಮ್ಮದೇ ಕೊಡುಗೆ ನೀಡುತ್ತಿರುವ ಜನಪ್ರತಿನಿಧಿಗಳು, ಐಎಎಸ್, ಐಪಿಎಸ್, ಕೆಎಎಸ್, ಪೊಲೀಸ್, ಸಚಿವಾಲಯದ ಅಧಿಕಾರಿಗಳು ವೈದ್ಯರು, ಚಲನಚಿತ್ರ ನಟ-ನಟಿಯರು ಮತ್ತು ಮಾಧ್ಯಮ ಕ್ಷೇತ್ರದಲ್ಲಿ ತೊಡಗಿಕೊಂಡಿರುವವರು ಸ್ಪರ್ಧಿಗಳಾಗಿ ಶಟಲ್ ಕೋರ್ಟ್‌ನಲ್ಲಿ ಮುಖಾಮುಖಿಯಾಗುತ್ತಿದ್ದಾರೆ. ಆಮೂಲಕ ಸಿಎಂ ಕಪ್ ಒಂದು ಕ್ಷೇತ್ರ ಆಟಗಾರರಿಗೆ ಮಾತ್ರ ಸೀಮಿತವಾಗಿರದೆ, ಎಲ್ಲ ಕ್ಷೇತ್ರದವರನ್ನು ಕ್ರೀಡೆಯಲ್ಲಿ ತೊಡಗಿಸುವ ದೊಡ್ಡ ಸಾಹಸವಾಗಿದೆ.