ಬೆಳಗಾವಿಯ ಬಿಮ್ಸ್ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದಾಗಿ ಬಾಣಂತಿ ಮತ್ತು ಆಕೆಯ ನವಜಾತ ಶಿಶು ಮೃತಪಟ್ಟಿರುವ ಗಂಭೀರ ಆರೋಪ ಕೇಳಿಬಂದಿದೆ. ಬೆಳಗಾವಿ ಜಿಲ್ಲೆಯ ತುರಮರಿ ಗ್ರಾಮದ 21 ವರ್ಷದ ಈರಮ್ಮ ಶಿಗೀಹಳ್ಳಿ ಎಂಬುವವರು ಏಪ್ರಿಲ್ 10ರಂದು ಮಧ್ಯಾಹ್ನ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ದಾಖಲಾದ ಸಮಯದಿಂದಲೂ ವೈದ್ಯರು ಸರಿಯಾದ ಚಿಕಿತ್ಸೆ ನೀಡಿಲ್ಲ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಇಂದು ಮಧ್ಯರಾತ್ರಿ ಸುಮಾರು 1:30ರ ವೇಳೆಗೆ ಚಿಕಿತ್ಸೆ ಫಲಿಸದೆ ತಾಯಿ ಮತ್ತು ಹೊಟ್ಟೆಯಲ್ಲಿದ್ದ ಹೆಣ್ಣು ಶಿಶು ಇಬ್ಬರೂ ಸಾವನ್ನಪ್ಪಿದ್ದಾರೆ.
ಈ ಘಟನೆಯಿಂದ ಕಂಗಾಲಾದ ಕುಟುಂಬಸ್ಥರು ಆಸ್ಪತ್ರೆಯ ಆವರಣದಲ್ಲಿ ಕಣ್ಣೀರು ಹಾಕುತ್ತಾ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಎಪಿಎಂಸಿ ಸಿಪಿಐ ಉಸ್ಮಾನ್ ಆವಟಿ ಹಾಗೂ ಪಿಎಸ್‌ಐ ಸರ್ದಾರ್ ಮುತ್ತತರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಈ ಘಟನೆಯು ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ವೈದ್ಯರ ವಿರುದ್ಧ ಕುಟುಂಬದವರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.