ಜೈಪುರ: ವಿಮಾನ ನಿಲ್ದಾಣಗಳಲ್ಲಿಯೂ ಬೀದಿ ನಾಯಿಗಳ ಹಾವಳಿ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಕೆಲ ದಿನಗಳ ಹಿಂದೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರನ್ ವೇಗೆ ನುಗ್ಗಿ ಬೀದಿನಾಯಿಗಳು ಓಡಾಡಿದ್ದ ಘಟನೆ ಬೆಳಕಿಗೆ ಬಂದಿತ್ತು. ಇದೀಗ ಜೈಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಹಿಳಾ ಪ್ರಯಾಣಿಕರೊಬ್ಬರ ಮೇಲೆ ನಾಯಿ ದಾಳಿ ನಡೆಸಿರು ಘಟನೆ ನಡೆದಿದೆ.ದೆಹಲಿಯಿಂದ ಆಗಮಿಸುತ್ತಿದ್ದ ಮಹಿಳಾ ಪ್ರಯಾಣಿಕರ ಮೇಲೆ ನಾಯಿ ದಾಳಿ ನಡೆಸಿದೆ. ನಾಯಿ ದಾಳಿಯಿಂದಾಗಿ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದು ಆಕೆಯ ಕಾಲಿನಲ್ಲಿ ರಕ್ತಸ್ರಾವವಾಗಿದೆ. ಈ ಘಟನೆ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಆತಂಕವನ್ನುಂಟು ಮಾಡಿದೆ. ಗಾಯಗೊಂಡ ಮಹಿಳೆಯನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಜೈಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದೆಹಲಿಯಿಂದ ಆಗಮಿಸುತ್ತಿದ್ದ ಮಹಿಳಾ ಪ್ರಯಾಣಿಕರ ಮೇಲೆ ನಾಯಿ ದಾಳಿ ನಡೆಸಿದೆ. ಭಾನುವಾರ ಮಧ್ಯಾಹ್ನ 2.20ರ ಸುಮಾರಿಗೆ ಈ ಘಟನೆ ನಡೆದಿದೆ. ಮಹಿಳಾ ಪ್ರಯಾಣಿಕರೊಬ್ಬರು ವಿಮಾನದಿಂದ ಇಳಿದು ನಂತರ ಟರ್ಮಿನಲ್ 2ರಲ್ಲಿ ಹೊರ ಬರುತ್ತಿದ್ದರು. ಗೇಟ್‌ನ ಹೊರಗೆ ನಾಯಿಯೊಂದು ಇದ್ದಕ್ಕಿದ್ದಂತೆ ಅವರ ಮೇಲೆ ಎಗರಿದೆ. ನಾಯಿ ದಾಳಿಯಿಂದ ಅವರ ಕಾಲಿಗೆ ಗಂಭೀರ ಗಾಯಗಳಾಗಿವೆ. ಮಹಿಳೆಯರ ಕಿರುಚಾಟ ಕೇಳಿ ತಕ್ಷಣ ಜನರು ಅವರ ಸಹಾಯಕ್ಕೆ ಬಂದಿದ್ದಾರೆ. ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಮಾಹಿತಿ ನೀಡಿದ ಬಳಿಕ ಗಾಯಗೊಂಡಿದ್ದ ಮಹಿಳೆಯನ್ನು ತಕ್ಷಣವೇ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.